Saturday, January 25, 2020

ಎಂಟೆಬೆ-ಕಾದಂಬರಿ

ಎಂಟೆಬೆ ಈ ಕಾದಂಬರಿಯ ವಿಷಯ ತಿಳಿದ್ದದ್ದೆ ಒಂದು ವಿಚಿತ್ರ ಸಂಗತಿ....ಪತ್ರಿಕೆಯನ್ನು ನಾನು ಒದುವುದಿಲ್ಲಾ ಹಾಗಾಗಿ ಮಾರುಕಟ್ಟೆಗೆ ಬಂದ ಹೊಸ ಪುಸ್ತಕಗಳ ಬಗೆಗೆ ನನ್ನ ಸಹೃದಯಿ ಓದುಗ ಮಿತ್ರರು ತಿಳಿಸುತ್ತಾರೆ.... ನನ್ನ ಸ್ನೇಹಿತ ರವಿಯ ಒತ್ತಾಯದ ಮೇರೆಗೆ ಈ ಪುಸ್ತಕವನ್ನು ಈಗ ಸ್ವಲ್ಪ ದಿನಗಳ ಹಿಂದಷ್ಡೆ ಖರೀದಿಸಿ ತಂದು ಓದಲು ಆರಂಬಿಸಿದೆ.....

ಅ ಪುಸ್ತಕದ ಬಗಿಗೆನ ನನ್ನ ಒಂದೆರೆಡು ಮಾತುಗಳು.....

 #ಸಂತೋಷಕುಮಾರ_ಮೆಹಂದಳೆ ರವರು ತಮ್ಮ ಕೃತಿಗಳಿಗೆ ಆರಿಸಿಕೊಳ್ಳುವ ವಿಷಯಗಳು ಹಾಗೂ ಬರೆಯುವ ಶೈಲಿ ಎರಡೂ ವಿಭಿನ್ನ .

 ಎಂಟೆಬೆ ಎನ್ನುವುದು ಉಗಾಂಡಾದ ಒಂದು ಏರ್ಪೋರ್ಟ್. ಇಲ್ಲಿ ಇಸ್ರೇಲ್ ನ ಜಗತ್ಪ್ರಸಿದ್ಧ ಬೇಹುಗಾರಿಕಾ ಸಂಸ್ಥೆ ಮೊಸಾದ್ ನಡೆಸಿದ ಥಂಡರ್ ಬೋಲ್ಟ್ ಕಾರ್ಯಾಚರಣೆಯ ಕಥನವೇ ಈ ಕಾದಂಬರಿ. ಇಸ್ರೇಲ್ ತಂತ್ರಜ್ಞಾನದಲ್ಲಿ, ಮಿಲಿಟರಿ ಕಾರ್ಯಾಚರಣೆಗಳಲ್ಲಿ, ಆಧುನಿಕ ಶಸ್ತ್ರಾಸ್ತ್ರಗಳ ಬಳಕೆಯಲ್ಲಿ ವಿಶ್ವದಲ್ಲಿಯೇ ಪ್ರಖ್ಯಾತ. ಇತಿಹಾಸ ಮರೆತವನು ಇತಿಹಾಸದ ಭಾಗವಾಗುತ್ತಾನೆ ಎನ್ನುವುದನ್ನು ಜಗತ್ತಿಗೆ ಪಾಠ ಮಾಡಿದ ದೇಶ ಇಸ್ರೇಲ್. ಮೆಡಿಟರೇನಿಯನ್ ಸಮುದ್ರದ ಆಗ್ನೇಯಕ್ಕಿರುವ, ಪಶ್ಚಿಮ ಏಷ್ಯಾದ ಅಂಗೈ ಅಗಲದ ಪುಟ್ಟ ರಾಷ್ಟ್ರ ಇಸ್ರೇಲ್. ಇಸ್ರೇಲ್ ಎಂದರೆ ದೇವರ ನಾಡು. ಕೇವಲ ಅರವತ್ತು ವರ್ಷಗಳ ಹಿಂದೆ ಯಹೂದಿಗಳಿಗಾಗಿ ಹುಟ್ಟಿಕೊಂಡ ನಾಡು ಇಸ್ರೇಲ್. ಈ ದೇಶ ತನ್ನ ಸುತ್ತ ಬರೀ ಶತ್ರು ರಾಷ್ಟ್ರಗಳಿಂದಲೇ ಆವರಿಸಲ್ಪಟ್ಟಿದೆ. ಸಿರಿಯ, ಟರ್ಕಿ, ಈಜಿಪ್ಟ್, ಸೌದಿ ಅರೇಬಿಯಾ, ಬಾಗ್ದಾದ್ ,ಪ್ಯಾಲೆಸ್ತೀನ್, ಲಿಬಿಯಾ, ಉಗಾಂಡಾ, ಕೀನ್ಯಾ, ಇರಾನ್ ಹೀಗೆ ಸಾಲು ಸಾಲು ಮುಸ್ಲಿಂ, ಅರಬ್ಬರ ನಾಡುಗಳಿಂದ ಸುತ್ತುವರೆದಿದೆ. ಆದರೆ ಇಸ್ರೇಲಿಗಳು ತಮ್ಮ ದೇಶದ ಹಿತಾಸಕ್ತಿಗಾಗಿ ಏನನ್ನು ಬೇಕಾದಾರೂ ಮಾಡಲು ತಯಾರು. ಇಸ್ರೇಲ್ ಸೈನ್ಯ ಇವತ್ತು ಶತೃಗಳ ಪಾಲಿಗೆ, ಪ್ಯಾಲೆಸ್ತೇನಿ ಅರಬ್ಬರ ಪಾಲಿಗೆ ಅತ್ಯಂತ ಅಪಾಯಕಾರಿ ದೇಶ. ನಮ್ಮ ಭಾರತದ ಎರಡು ಶತ್ರು ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಚೀನಾದ ಉಪಟಳವನ್ನೇ ನಮಗೆ ಹತ್ತಿಕ್ಕಲು ಕಷ್ಟವಾಗುತ್ತಿದೆ. ಆದರೆ ಜಗತ್ತಿನ ಯಾವುದೇ ದೇಶವಾಗಲಿ ನುಗ್ಗಿ ಶತ್ರುಗಳನ್ನು ಸದೆಬಡಿಯುವುದರಲ್ಲಿ ಎತ್ತಿದ ಕೈ ಇಸ್ರೇಲ್ ದೇಶದ ಸೈನಿಕರು. ಸ್ವತಂತ್ರ ರಾಷ್ಟ್ರವೊಂದು ನಿರಂತರ ಹದಿನೇಳು ಯುದ್ಧಗಳನ್ನು ಗೆದ್ದ ಉದಾಹರಣೆ ಏನಾದರೂ ಇದ್ದರೆ ಅದು ಇಸ್ರೇಲ್ ಮಾತ್ರ.

#ಮೊಸಾದ್ ಇಡೀ ಜಗತ್ತಿನ ಅತ್ಯಂತ ಅಪಾಯಕಾರಿ ಇಂಟೆಲಿಜೆನ್ಸ್ ಏಜೆನ್ಸಿ. ಮೊಸಾದ್ ಕಮಾಂಡೋಗಳು ತನ್ನ ಶತೃಗಳು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಹುಡುಕಿಕೊಂಡು ಹೋಗಿ ಹೊಡೆದು ಬರುವುದರಲ್ಲಿ ಸಿದ್ದ ಹಸ್ತರು. ಜಗತ್ತಿನ ಬೇರೆಬೇರೆ ಕಡೆ ರಹಸ್ಯ ಕಾರ್ಯಾಚರಣೆ ನಡೆಸಿ ಕೊಂದುಹಾಕಿರುವ ಶತ್ರುಗಳ ಸಂಖ್ಯೆ ಸುಮಾರು 2700. ಶತ್ರು ಎಂದು ಕಣ್ಣಿಟ್ಟ ಮೇಲೆ ಈ ಮೊಸಾದ್ ಪಡೆ ಅವನು ಪಾತಾಳದಲ್ಲಿದ್ದರೂ ರಹಸ್ಯವಾಗಿ ಹೋಗಿ ಸಾಯಿಸದೆ ಬಿಡುವುದಿಲ್ಲ. ಇವರ ಟಾರ್ಗೆಟ್ ಎಂದೂ ಮಿಸ್ಸೇ ಇಲ್ಲ. ಪ್ರತಿಯೊಂದು ದೇಶ ತನಗೂ ಒಂದು ಇಂತಹ ಪಡೆ ಇರಬೇಕೆಂದು ಬಯಸುವಂತಹ ಪಡೆ #ಮೊಸಾದ್. ಇವತ್ತಿಗೂ ಜಗತ್ತಿನ ಯಾವುದೇ ದೇಶ ಇಸ್ರೇಲ್ ನ್ನು ತಡವಿಕೊಳ್ಳಲು ಹೆದರುತ್ತದೆ. ಇಸ್ರೇಲ್, ಮೊಸಾದ್, ಉಗಾಂಡಾದ ಸರ್ವಾಧಿಕಾರಿಯಾಗಿದ್ದ #ಇದೀ_ಅಮೀನ್  ಈ ಎಲ್ಲದರ ಬಗ್ಗೆ ಲೇಖಕರು ಈ ಕೃತಿಯಲ್ಲಿ ವಿವರವಾದ ಮಾಹಿತಿ ನೀಡಿದ್ದಾರೆ.

ಪ್ಯಾಲೇಸ್ತೇನಿ ಭಯೋತ್ಪಾದಕರು ಇಸ್ರೇಲ್ ಜೈಲಿನಲ್ಲಿರುವ ತಮ್ಮ ಕಡೆಯವರನ್ನು ಬಿಡಿಸಿಕೊಳ್ಳಲು ಒಂದು ವಿಮಾನವನ್ನು ಅಪಹರಿಸಿ ಇದೀ ಅಮೀನ್ ನ ಸಹಕಾರದಿಂದ ಉಗಾಂಡಾದ ಎಂಟೆಬೆ ಏರ್ ಪೋರ್ಟ್ ನಲ್ಲಿ ಅದನ್ನಿಳಿಸಿ, ಅದರಲ್ಲಿರುವ ಸುಮಾರು ತೊಂಬತ್ತು ಜನ ಯಹೂದಿಗಳನ್ನು  ಒತ್ತೆಯಾಳಾಗಿ ಇಟ್ಟುಕೊಂಡು, ಪ್ಯಾಲೆಸ್ತೇನಿ ಯುದ್ದಖೈದಿಗಳನ್ನು ಬಿಡುವಂತೆ ಒತ್ತಡ ಹೇರುತ್ತಾರೆ. ಇಲ್ಲದಿದ್ದರೆ ಒತ್ತೆಯಾಳುಗಳನ್ನು ಸಾಯಿಸುತ್ತೇವೆಂದು ಬೆದರಿಕೆ ಒಡ್ಡುತ್ತಾರೆ. ಆದರೆ ಅಂತಹ ಕಠಿಣ ಸಂದರ್ಭದಲ್ಲಿ ಇಸ್ರೇಲ್ ಪ್ರಧಾನಿ ಹಾಗು ಮೊಸಾದ್ ತೆಗೆದುಕೊಂಡ ನಿರ್ಣಯ ಗ್ರೇಟ್. ಭಯೋತ್ಪಾದಕರ ಬೆದರಿಕೆಗೆ ಸೊಪ್ಪು ಹಾಕುವುದಿಲ್ಲ. ಸುಮಾರು 4200 ಕಿ.ಮೀ. ದೂರವಿರುವ ಶತೃದೇಶ ಉಂಗಾಂಡಾಗೆ ನುಗ್ಗಿ, ಶತ್ರುಗಳ ಮಾರಣಹೋಮ ಮಾಡಿ, ಒತ್ತೆಯಾಳುಗಳಾಗಿ ಸಾವಿನ ದವಡೆಯಲ್ಲಿರುವ ಇಸ್ರೇಲಿಗಳನ್ನು ಪಾರು ಮಾಡಬೇಕೆಂಬ ನಿರ್ಧಾರ ಮಾಡುತ್ತಾರೆ. ಇಸ್ರೇಲ್ ಎಂದರೆ ಏನು ಎಂಬುದನ್ನು ಇಡೀ ಜಗತ್ತಿಗೆ ಮನವರಿಕೆ ಮಾಡಿಕೊಡಲು ಸಿದ್ದರಾಗುತ್ತಾರೆ. ಇದಕ್ಕಾಗಿ ಮೊಸಾದ್ ನ ಜನರಲ್ ಶಾಮ್ರೋನ್, ಕಮಾಂಡರ್ ಯೂನಿ ತಮ್ಮ ತಂಡದೊಂದಿಗೆ ಕೈಗೊಳ್ಳುವ ಕಾರ್ಯಾಚರಣೆಯೇ #ಆಪರೇಷನ್_ಥಂಡರ್_ಬೋಲ್ಟ್.

ಈ ಆಪರೇಷನ್ ಥಂಡರ್ ಬೋಲ್ಟ್ ವಿಚಾರಕ್ಕೆ ಇಸ್ರೇಲ್ ನ ವಿರೋಧ ಪಕ್ಷದ ನಾಯಕ ಯಾವುದೇ ವಿರೋಧ ವ್ಯಕ್ತಪಡಿಸದೆ ಎಷ್ಟು ಚೆನ್ನಾಗಿ ಆಡಳಿತ ಸರ್ಕಾರಕ್ಕೆ ತಮ್ಮ ಬೆಂಬಲ ಕೊಡುತ್ತಾನೆ ಅಂದರೆ ಓದಲು ಖುಷಿಯಾಗುತ್ತದೆ. ಇಸ್ರೇಲ್ ನ ಸಾರ್ವಭೌಮತೆಗೆ ಧಕ್ಕೆ ತರುವುದಕ್ಕೆ ಯಾರೂ ಬಯಸುವುದಿಲ್ಲ. ರಾಜಕೀಯಕ್ಕಿಂತ ದೇಶ ಮುಖ್ಯ ಎಂಬ ಅವರ ಭಾವನೆ ನೋಡಿದಾಗ ನಮ್ಮ ವಿರೋಧ ಪಕ್ಷಗಳ ನಡುವಳಿಕೆ ನೆನೆದು ಹೇಸಿಗೆಯಾಗುತ್ತದೆ.

ಮೊಸಾದ್ ತನ್ನ ಕಾರ್ಯಾಚರಣೆಗಾಗಿ ಮಾಡಿಕೊಳ್ಳುವ ತಯಾರಿ, ಹಾಗು ಕಾರ್ಯಾಚರಣೆಯ ವಿವರಗಳನ್ನು ಲೇಖಕರು ಎಷ್ಟು ಅದ್ಬುತವಾಗಿ ವಿವರಿಸಿದ್ದಾರೆಂದರೆ- ಓದುವಾಗ ನಾವೂ ಆ ಕಾರ್ಯಾಚರಣೆಯ ಭಾಗವಾದಂತೆ ಭಾಸವಾಗುತ್ತದೆ. ಏರ್ಪೋರ್ಟ್ ಟರ್ಮಿನಲ್ ಗೆ ನುಗ್ಗಿ ಶತ್ರುಗಳನ್ನು ಸದೆ ಬಡಿಯುವ ಘಟನೆ ಉಸಿರು ಬಿಗಿ ಹಿಡಿದು ಓದುವಷ್ಟು ರೋಮಾಂಚಕವಾಗಿದೆ. ಅದರಲ್ಲೂ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸುವುದು, ತನ್ನ ಕಮಾಂಡೋಗಳಿಗೆ ಸೂಕ್ತ ಸೂಚನೆಗಳ ಮೂಲಕ ಅವರ ಸಹಕಾರದಿಂದ, ತನ್ನ ಅಪ್ರತಿಮ ಶೌರ್ಯದ ಮೂಲಕ ಶತ್ರುಗಳನ್ನು ಚಿಂದಿ ಉಡಾಯಿಸುವುದು ಕರ್ನಲ್ ಯೂನಿ. ಆದರೆ ಕಾರ್ಯಾಚರಣೆಯಲ್ಲಿ ಇಸ್ರೇಲ್ ನ ಯಾವುದೇ ಸೈನಿಕ ಸಾಯದಿದ್ದರೂ ಕೊನೆಯಲ್ಲಿ ಉಗಾಂಡಾದ ಸೈನಿಕನ ಗುಂಡಿಗೆ ಸಿಕ್ಕಿ ಕರ್ನಲ್ ಯೂನಿ ಆಲಿಯಾಸ್ ಯೋನಾಥನ್ ನೇತನ್ಯಾಹು ವೀರ ಮರಣವನ್ನಪ್ಪುತ್ತಾನೆ. ಇದೇ ಯೋನಾಥನ್ ನೆತನ್ಯಾಹುವಿನ ತಮ್ಮನಾದ #ಬೆಂಜಮಿನ್_ನೆತನ್ಯಾಹು ಈಗ ಇಸ್ರೇಲ್ ಅಧ್ಯಕ್ಷ ಆಗಿದ್ದಾರೆ . ಯೂನಿಯಂತಹ ಕರ್ನಲ್ ಪ್ರತಿಯೊಂದು ಸೈನ್ಯ ಬಯಸುವಂತಹ ಕರ್ನಲ್. ನಮ್ಮ ಭಾರತದ ಗುಪ್ತಚರ ಸಂಸ್ಥೆ #ರಾ ಮೊಸಾದ್ ತರ ಕಾರ್ಯ ನಿರ್ವಹಿಸುವ ಹಾಗಿದ್ದರೆ ಎಷ್ಟು ಚೆಂದ.

#ಮೆಹೆಂದಳೆ ಜೀ ನಿಮ್ಮ ಕಾದಂಬರಿಗಳನ್ನು ಓದುವುದೇ ಚೆಂದ. ನಿಮ್ಮ ಲೇಖನಿಯಿಂದ ಇನ್ನು ಚೆಂದದ ಕೃತಿಗಳು ಹೀಗೆ ಮೂಡಿಬರುತ್ತಿರಲಿ ಎಂಬದೆ ನನ್ನ ಆಶಯ